ಯಾಮಿನಿ ಕೃಷ್ಣಮೂರ್ತಿ -
	 ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ನೃತ್ಯಶೈಲಿಗಳಲ್ಲಿ ಪರಿಣಿತರಾದ ಕಲಾವಿದರು. ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ಕೃಷ್ಣಮೂರ್ತಿ ಆಂಧ್ರಪ್ರದೇಶದವರು. ಎಳೆಯ ವಯಸ್ಸಿನಲ್ಲಿಯೆ ಮಗಳ ಕಲಾಭಿರುಚಿಯನ್ನು ಗಮನಿಸಿ, ಅದರ ಸರ್ವತೋಮುಖ ಬೆಳವಣಿಗೆಗೆ ನೆರವಾದರು. ಮಗಳಿಗೆ ನೃತ್ಯ ಶಿಕ್ಷಣವನ್ನು ಕೊಡಿಸುವ ಸಲುವಾಗಿ ಕೃಷ್ಣಮೂರ್ತಿಯವರು 1954ರಲ್ಲಿ ಮದರಾಸಿಗೆ ಹೋಗಿ ನೆಲೆಸಿದರು. ಅಲ್ಲಿ ಮೊದಲು ಗೌರಿ ಅಮ್ಮನವರಲ್ಲಿ ನೃತ್ಯಾಭ್ಯಾಸ ಪ್ರಾರಂಭವಾಯಿತು. ಅನಂತರ ಪ್ರಸಿದ್ಧ ಕಲಾಕ್ಷೇತ್ರದ ರುಕ್ಮಿಣಿ ಅರುಂಡೇಲ್ ಅವರಲ್ಲಿ ಹಲವು ವರ್ಷ ಉನ್ನತ ಶಿಕ್ಷಣವನ್ನು ಪಡೆದರು. ಕೂಚುಪುಡಿ ನೃತ್ಯವನ್ನು ವೇದಾಂತಂ ಲಕ್ಷೀನಾರಾಯಣ ಶಾಸ್ತ್ರಿ, ವೇಣುಗೋಪಾಲಶರ್ಮ ಮತ್ತು ಚಿನ್ನಕೃಷ್ಣಮೂರ್ತಿಯವರಲ್ಲಿ ಕಲಿತರು. ಒಡಿಸ್ಸ ನೃತ್ಯವನ್ನು ಕೇಳುಚರಣ್ ಮಹಾಪಾತ್ರ, ಪಂಕಜ ಚರಣದಾಸ್ ಅವರಲ್ಲಿ ಅಭ್ಯಾಸಮಾಡಿದರು. ಭಾರತ ಸರ್ಕಾರದ ಶಿಷ್ಯವೇತನವನ್ನು ಪಡೆದು ನೃತ್ಯಕ್ಷೇತ್ರದಲ್ಲಿ ಪ್ರತಿಭಾನ್ವಿತ ನಾಟ್ಯಾಚಾರ್ಯರಾದ ವಳವೂರ್ ರಾಮಯ್ಯ ಪಿಳ್ಳೆ, ಎಲ್ಲಪ್ಪ ಪಿಳ್ಳೆ ಚೊಕ್ಕಲಿಂಗಂ ಪಿಳ್ಳೆ, ಕಿಟ್ಟಿಪ್ಪಪಿಳ್ಳೆ, ಮೊದಲಾದವರಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆದರು.

	ಯಾಮಿನಿಯವರು 1956ರಲ್ಲಿ ರುಕ್ಮಿಣಿ ಅರುಂಡೇಲ್ ಅವರೊಡನೆ ನೃತ್ಯ ನಾಟಕಗಳಲ್ಲಿ ಪಾಲ್ಗೊಂಡು ವಿದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸಿದರು. ದೆಹಲಿಯ ಸಂಗೀತ ಭಾರತೀ ಇನ್‍ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಇವರು ಅಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದರು.

	ಯಾಮಿನಿಯವರ ಕಲಾಸೇವೆಗೆ ಹಲವು ಬಗೆಯ ಪ್ರಶಸ್ತಿಗಳು ಲಭಿಸಿವೆ. ಭಾರತ ಸರ್ಕಾರ 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.  1974ರಲ್ಲಿ ತಿರುಪತಿ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ಪದವಿ ನೀಡಿತು. ತಿರುಪತಿ ದೇವಸ್ಥಾನದ ಆಸ್ಥಾನ ನರ್ತಕಿಯಾಗಿಯೂ ಇವರು ನೇಮಕಗೊಂಡಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ 1978ರಲ್ಲಿ ಪ್ರಶಸ್ತಿ ನೀಡಿತು. ಶ್ರೀಕೃಷ್ಣಗಾನಸಭೆ ಯಾಮಿನಿಯವರಿಗೆ ನೃತ್ಯ ಚೂಡಾಮಣಿ ಎಂಬ ಬಿರುದನ್ನಿತ್ತು ಸನ್ಮಾನಿಸಿದೆ.               
 (ಎಂ.ವಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ